ಬ್ಲೂಮ್ಫೀಲ್ಡ್, ಲಿಯೊನಾರ್ಡ್

ಬ್ಲೂಮ್‍ಫೀಲ್ಡ್, ಲಿಯೊನಾರ್ಡ್

	1887-1949 ಅಮೆರಿಕೆಯ ಪ್ರಸಿದ್ಧ ಭಾಷಾವಿಜ್ಞಾನಿ, ಜರ್‍ವಿಸ್‍ಕಾನ್ಸಿನ್ ವಿಶ್ವವಿಧ್ಯಾಲಯದಲ್ಲಿ ಎಡ್ವರ್ಡ್ ಪ್ರೋಕೋಕ್; ನೇತೃತ್ವದಲ್ಲೂ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಪ್ರಾನ್ಸಿಸ್ ಎ ವುಡ್ ನೇತೃತ್ವದಲ್ಲೂ ವ್ಯಾಸಂಗ ನಡೆಸಿ 1909ರಲ್ಲಿ ಡಾಕ್ಟೋರೇಟ್ ಪದವಿ ಪಡೆದ. ಜಮ್ರ್ಯಾನಿಕ್ ಭಾಷೆಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ ಈತ ಶಿಕಾಗೊ ವಿಶ್ವವಿದ್ಯಾಲಯದಲ್ಲಿ ಜರ್ಮನಿಕ್ ಭಾಷಾಶಾಸ್ತ್ರದ ಪ್ರಾಧ್ಯಾಪಕನಾಗಿ ಆನಂತರ ಯೇಲ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ. ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಅಮೆರಿಕ ಸಂಸ್ಥೆಯ ಸ್ಥಾಪಕರ ಪೈಕಿ ಒಬ್ಬನಾಗಿದ್ದ ಈತ 1932ರಲ್ಲಿ ಈ ಸಂಸ್ಥೆಯ ಅಧ್ಯಕ್ಷನೂ ಆಗಿದ್ದ.

	ಬ್ಯೂಮ್‍ಫೀಲ್ಡ್‍ನ ಮೊದಲ ಬರಹಗಳು ಜಮ್ರ್ಯಾನಿಕ್ ಮತ್ತಿತರ ಇಂಡೊಯೂರೊಪಿಯನ್ ಭಾಷೆಗಳಿಗೆ ಸಂಬಂಧಿಸಿವೆ. ಈ ಭಾಷೆಗಳ ಬಗ್ಗೆ ಬದುಕಿನುದ್ದಕ್ಕೂ ಆಸಕ್ತಿ ಉಳಿಸಿಕೊಂಡುಬಂದ. 1914ರಲ್ಲಿ ಎನ್ ಇನ್‍ಟ್ರೋಡಕ್ಷನ್ ಟು ದಿ ಸ್ಟಡಿ ಆಫ್ ಲಾಂಗ್ವೇಜ್ ಎಂಬ ಪುಸ್ತಕ ಬರೆದ. ಅನಂತರ 1917ರಲ್ಲಿ ಫಿಲಿಫೀನ್ಸ್‍ನ ತಗಲಾಗ್ ಭಾಷೆಯ ಬಗೆಗೆ ಅಧ್ಯಯನ ನಡೆಸಿ ಪುಸ್ತಕ ಪ್ರಕಟಿಸಿದ. ಇದೇ ವೇಳೆಗೆ ಉತ್ತರ ಅಮೆರಿಕೆಯ ಈಶಾನ್ಯ ಭಾಗದ ಅಲ್‍ಗಾನ್‍ಕಿನ್ ಭಾಷೆಗಳನ್ನು ಕುರಿತು ಅಧ್ಯಯನ ಪ್ರಾರಂಭಿಸಿ 1922ರಲ್ಲಿ ಆ ಭಾಷೆಗಳಿಗೆ ಸಂಬಂಧಪಟ್ಟ ಮೊದಲ ಪ್ರಕಟಣೆಯನ್ನು ಹೊರತಂದ ಈತನ ಆಚಾರ್ಯಕೃತಿ ಲ್ಯಾಂಗ್ವೇಜ್ 1933ರಲ್ಲಿ ಪ್ರಕಟವಾಯಿತು. ಇದರಲ್ಲಿ ಭಾಷಾವಿಜ್ಞಾನದ ತತ್ತ್ವಗಳನ್ನು ವಿಶ್ಲೇಷಿಸಿ ವಿವರಿಸಲಾಗಿದೆ. ಈ ಕೃತಿಯಲ್ಲಿ ಪ್ರತಿಪಾದಿತವಾಗಿರುವ ಹೊಸ ವಿಚಾರಗಳು ಭಾಷಾಕ್ಷೇತ್ರದಲ್ಲಿ ಅಧ್ಯಯನ ಕೈಗೊಳ್ಳುವವರಿಗೆ ದಾರಿದೀಪವಾಗಿವೆ. ಐತಿಹಾಸಿಕ, ತೌಲನಿಕ ಮತ್ತು ವಿವರಣಾತ್ಮಕ ಭಾಷಾವಿಜ್ಞಾನದಲ್ಲಿ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಈತ ಇಂಡೊಯೂರೊಪಿಯನ್ ಭಾಷೆಗಳ ಮೇಲೆ ಮಾತ್ರವಲ್ಲದೆ ಮಲಯೊಪಾಲಿನೇಷ್ಯನ್ ಭಾಷೆಗಳ ಬಗ್ಗೆಯೂ ಕೆಲಸ ಮಾಡಿದ್ದಾನೆ. ಪಾಶ್ಚಾತ್ಯ ಭಾಷಾವಿಜ್ಞಾನ ಅಧ್ಯಯನದ ಮೇಲೆ ಪಾಣಿನಿಯ ಪ್ರಭಾವವಲಯಕ್ಕೆ ಸೇರುವ ಎರಡನೆಯ ಪ್ರಮುಖ ಕೃತಿಯೆಂದರೆ ಈತನದೇ. 					  (ಎಂ.ಬಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ